ಮೂಡಿಗೆರೆ: ಕಳಸ ಭಾಗದಲ್ಲಿ ಈ ಬಾರಿ ಮಳೆಯಿಲ್ಲದೇ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಹಾಗಾಗಿ ಮೂಡಿಗೆರೆ ಮತ್ತು ಕಳಸ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಕೂಡಲೇ ರಾಜ್ಯ ಸರಕಾರ ಘೋಷಣೆ ಮಾಡಬೇಕೆಂದು ಬಿಜೆಪಿ ಮುಖಂಡ ಪ್ರಸನ್ನ ಕೃಷ್ಣಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿಗೆ ಪ್ರತಿಕ್ರಿಯಿಸಿದ ಅವರು, ಮಳೆಯಿಲ್ಲದೇ ಈಗಾಗಲೇ ತಾಲೂಕಿನಲ್ಲಿ ಹರಿಯುವ ನದಿ, ಹಳ್ಳ, ಕೆರೆಕಟ್ಟೆಗಳೆಲ್ಲಾ ಬತ್ತಿ ಹೋಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಅಲ್ಲದೇ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ, ಕಾಳುಮೆಣಸು ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆ ಕುಂಠಿತವಾಗಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈಗಾಗಲೇ ಕೃಷಿ ನಿರ್ವಹಣೆ, ಕಾರ್ಮಿಕರ ಕೊರತೆ. ಹಾಗೂ ಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ಕಂಗಾಲಾಗಿದ್ದಾರೆ. ಮಲೆನಾಡಿನ ರೈತರ ಸಂಕಷ್ಟವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಸಮಗ್ರ ಬೆಳೆ ನಷ್ಟ ಸಮೀಕ್ಷೆ ನಡೆಸಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ತಾಲೂಕನ್ನು ಬರಪೀಡಿತ ಪ್ರದೇಶ ಘೋಷಣೆಗೆ ಅಗತ್ಯ ಕ್ರಮ ಕೈಗೊಂಡು ರೈತರಿಗೆ ಸೂಕ್ತ ಪರಿಹಾರ, ಬೆಳೆ ವಿಮೆ ಹಾಗೂ ಕೃಷಿ ಚಟುವಟಿಕೆಗಳಿಗೆ ವಿಶೇಷ ನೆರವು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮೂಡಿಗೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದರೆ ವಿಶೇಷ ಅನುದಾನ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರಕಾರ ತಾಲೂಕನ್ನು ಸಂಪೂರ್ಣ ಕಡೆಗಣಿಸಿದೆ. ಸರಕಾರದ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಉಂಟಾಗಿದ್ದು, ಅಭಿವೃದ್ಧಿ ಶೂನ್ಯವಾಗಿದೆ. ಇದರಿಂದ ರಾಜ್ಯದ ಜನರು ಕಾಂಗ್ರೆಸ್ ಸರಕಾರ ಆಡಳಿತದ ಬಗ್ಗೆ ಬೇಸರೆಗೊಂಡಿದ್ದಾರೆ. ಇತ್ತೀಚೆಗೆ ನಡೆದ ಶಿಕ್ಷಣ ಮತ್ತು ಪದವೀಧರ ಕ್ಷೇತ್ರಗಳ ಎಂಎಲ್‌ಸಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ದೊರೆತ ಬೆಂಬಲವು ಕಾಂಗ್ರೆಸ್ ಸರಕಾರದ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
