ಬೆಂಗಳೂರು: ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್ ತಪ್ಪಿದೆ ಎಂಬ ಕಾರಣದಿಂದ ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸಂಬಂಧ ಹಾಳಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
ನಗರದ ಜೆ.ಪಿ. ಭವನದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ದಶಕಗಳಿಂದ ಸಂಬಂಧ ಇದೆ. ರಾಜ್ಯಸಭಾ ಸ್ಥಾನ ತಪ್ಪಿದೆ ಎಂಬ ಕಾರಣಕ್ಕೆ ನಮ್ಮ ನಡುವಿನ ಸಂಬಂಧ ಕಡಿದು ಹೋಗುವುದಿಲ್ಲ ಎಂದು ತಿಳಿಸಿದರು.
ನಾವು ಎನ್ಡಿಎ ಜತೆ ಕೈ ಜೋಡಿಸಿದ್ದು, ನಮ್ಮ ಪಕ್ಷ ಅದರಲ್ಲೇ ಮುಂದುವರೆಯಲಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಕ್ಯಾಬಿನೆಟ್ ಸಚಿವರಾಗಿ ಮುಂದುವರೆದು, ದೇಶದ ಸೇವೆ ಮುಂದುವರೆಸಲಿದ್ದಾರೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು. ನಾನು ರಾಜ್ಯಸಭೆಗೆ ಸ್ಥಾನ ಬೇಕು ಎಂದರೆ, ಆ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರ ಜತೆ ಮಾತನಾಡುತ್ತಿದ್ದೆ. ಆದರೆ ನನಗೆ ಅದರಲ್ಲಿ ಆಸಕ್ತಿ ಇಲ್ಲ. ಹಾಗಾಗಿ ನಾನು ಈ ಸಂಬಂಧ ಯಾರನ್ನೂ ಭೇಟಿಯಾಗಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
