ಮೂಡಿಗೆರೆ: ಮದುವೆ ನಿಶ್ಚಯವಾಗಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ.
ಹೌದು.. ಒಂದು ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮೃತ ಯುವಕ 25 ವರ್ಷದ ಅಭಿಷೇಕ್ ಎಂಬುದಾಗಿ ತಿಳಿದು ಬಂದಿದೆ ಆಗಸ್ಟ್ 25 ರಂದು ವಿವಾಹ ದಿನಾಂಕ ನಿಗದಿಯಾಗಿತ್ತು. ಎರಡೂ ಮನೆಯವರು ಮದುವೆ ಸಂಭ್ರಮದಲ್ಲಿ ಮದುವೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದರು ಅಭಿಷೇಕ್ 4 ದಿನದ ಹಿಂದೆ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಕೂಡಲೇ ಆತನನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿತ್ತು.
ನಾಲ್ಕು ದಿನದ ಜೀವನ್ಮರಣದ ಹೋರಾಟದಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಸಂತಸ ತುಂಬಿ ತುಳುಕಬೇಕಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಅಭಿಷೇಕ್ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮಗನನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
