Tuesday, June 9, 2026
Homeಜಿಲ್ಲಾಸುದ್ದಿRailway Project: ಶೃಂಗೇರಿ ರೈಲ್ವೆ ಯೋಜನೆಯಿಂದ ಪರಿಸರ ನಾಶಕ್ಕೆ ಹೊಸತೊಂದು ಯೋಜನೆ ರೂಪುಗೊಳ್ಳುತ್ತಿದೆ: ನಾಗರಾಜ ಕೂವೆ

Railway Project: ಶೃಂಗೇರಿ ರೈಲ್ವೆ ಯೋಜನೆಯಿಂದ ಪರಿಸರ ನಾಶಕ್ಕೆ ಹೊಸತೊಂದು ಯೋಜನೆ ರೂಪುಗೊಳ್ಳುತ್ತಿದೆ: ನಾಗರಾಜ ಕೂವೆ

ಶಿವಮೊಗ್ಗ – ಶೃಂಗೇರಿ-ಮಂಗಳೂರು’ ನೂತನ ರೈಲ್ವೆ ಮಾರ್ಗದ ನಿರ್ಮಾಣಕ್ಕೆ, ರೈಲ್ವೆ ಇಲಾಖೆಯು ‘ಅಂತಿಮ ಸ್ಥಳ ಸಮೀಕ್ಷೆ ‘(FSL) ಮತ್ತು ‘ವಿವರವಾದ ಯೋಜನಾ ವರದಿ’ (DPR) ತಯಾರಿಕೆಗೆ ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ. ಆದರೆ ಇದರಿಂದ  ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರೈಲ್ವೆ ನಿರ್ಮಾಣಕ್ಕೆ ಅಪಾರವಾದ ಅರಣ್ಯ ಮತ್ತು ಪರಿಸರ ನಾಶವಾಗುತ್ತದೆ ಎಂದು ಪರಿಸರಾಸಕ್ತ ನಾಗರಾಜ ಕೂವೆ ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು .. ಶಿವಮೊಗ್ಗ- ಮಂಗಳೂರು ರೈಲು ಮಾರ್ಗ 332 ಕಿಲೋಮೀಟರ್ ಉದ್ಜದ ₹3300 ಕೋಟಿ ರೂ. ಯೋಜನಾ ವೆಚ್ಚ ಅಂದಾಜಿಸಲಾಗಿದೆ. ಪ್ರಸ್ತಾಪಿತ ರೈಲ್ವೆ ಮಾರ್ಗವು ಜೀವವೈವಿಧ್ಯದ ಸೂಕ್ಷ್ಮ ವಲಯವಾದ ಪಶ್ಚಿಮ ಘಟ್ಟಗಳ ಪ್ರಮುಖ ಪ್ರದೇಶದ ಮೂಲಕ ಹಾದುಹೋಗಬೇಕಾಗುತ್ತದೆ.

ಯಾವ ಹಾದಿಯಲ್ಲಿ ಹೋದರೂ ಇದು ಸೋಮೇಶ್ವರ ವನ್ಯಜೀವಿ ಧಾಮ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶವನ್ನು ಸೀಳಿಕೊಂಡು ಹೋಗಲೇಬೇಕು. ಇಲ್ಲಿ ಲಕ್ಷಾಂತರ ಗಿಡ ಮರಗಳ ಕಡಿತಲೆ, ಜೀವವೈವಿಧ್ಯ ನಾಶ ನಿಶ್ಚಿತ.

ಕಾಡು ನಾಶ ಮಾಡಿ ಬರುವ ರೈಲ್ವೆ ಹಳಿಗಳು ವನ್ಯಜೀವಿಗಳ ಸಾಂಪ್ರದಾಯಿಕ ವಲಸೆ ಕಾರಿಡಾರ್‌ಗಳನ್ನು ಶಾಶ್ವತವಾಗಿ ಇಭ್ಭಾಗಿಸುತ್ತವೆ. ಇದರಿಂದಾಗಿ ವನ್ಯಜೀವಿಗಳು ಕಾಡುಗಳಿಂದ ಹೊರಬಂದು ಅಕ್ಕಪಕ್ಕದ ಕೃಷಿ ಭೂಮಿಗೆ ನುಗ್ಗುವುದು ಅನಿವಾರ್ಯವಾಗುತ್ತದೆ. ಇದು ಸ್ಥಳೀಯ ಕಾಫಿ, ಅಡಿಕೆ ಮತ್ತು ಭತ್ತದ ಬೆಳೆಗಾರರನ್ನು ಸಂಪೂರ್ಣವಾಗಿ ಸಂಕಷ್ಟಕ್ಕೆ ತಳ್ಳುತ್ತದೆ. ಇದು ರೈತರ ಆದಾಯದ ಕುಸಿತಕ್ಕೆ ಕಾರಣವಾಗುತ್ತದೆ ಅಲ್ಲದೇ ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ.

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಈಗಾಗಲೇ ತೀವ್ರವಾದ ಮಾನವ-ಆನೆ ಮತ್ತು ಮಾನವ-ಚಿರತೆ ಸಂಘರ್ಷಗಳನ್ನು ಎದುರಿಸುತ್ತಿವೆ. ಬೆಳೆ ಹಾನಿ, ಜೀವ ಹಾನಿ ದಿನೇದಿನೇ ಹೆಚ್ಚುತ್ತಿದೆ. ಆನೆ ದಾಳಿಯಿಂದ ಕಳೆದ ಒಂದೂವರೆ ವರ್ಷದಲ್ಲಿ ಶೃಂಗೇರಿ ಕ್ಷೇತ್ರದಲ್ಲೇ ಹತ್ತಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಹೊಸ ರೈಲ್ವೆ ಯೋಜನೆ, ಮಾನವ-ವನ್ಯಜೀವಿ ಸಂಘರ್ಷವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಜೊತೆಗೆ ಸಾಮಾಜಿಕ-ಆರ್ಥಿಕ ಹೊರೆಯನ್ನೂ ಹೆಚ್ಚಿಸುತ್ತದೆ.

ಮಲೆನಾಡಿನಲ್ಲಿ ರೈಲ್ವೆ ಮಾರ್ಗದ ನಿರ್ಮಾಣವಾಗಬೇಕೆಂದರೆ, ಬೃಹತ್ ಪ್ರಮಾಣದ ಗುಡ್ಡಗಳನ್ನು ಕತ್ತರಿಸುವುದು, ಭಾರಿ ಸ್ಫೋಟಗಳನ್ನು ಮಾಡುವುದು ಮತ್ತು ಸುರಂಗಗಳನ್ನು ಕೊರೆಯುವುದು ಅನಿವಾರ್ಯವಾಗಲಿದೆ. ಈ ಚಟುವಟಿಕೆಗಳು ಇಲ್ಲಿನ ಸೂಕ್ಷ್ಮ ಮೇಲ್ಪದರದ ಮಣ್ಣು ಮತ್ತು ಕಡಿದಾದ ಇಳಿಜಾರುಗಳನ್ನು ಅಸ್ಥಿರಗೊಳಿಸುತ್ತದೆ. ಇದು ಭೀಕರ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳ ತೀವ್ರತೆಯನ್ನು ಹೆಚ್ಚಿಸಿ, ಮಾನವ ಜೀವ ಹಾಗೂ ಸಾರ್ವಜನಿಕ ಆಸ್ತಿಗೆ ಅಪಾರ ಹಾನಿಯುಂಟುಮಾಡುತ್ತದೆ.

ಇಲ್ಲಿನ ಪರ್ವತ ಶ್ರೇಣಿಗಳು ತುಂಗಾ, ಭದ್ರಾ, ನೇತ್ರಾವತಿ ಮತ್ತು ಅವುಗಳ ಉಪನದಿಗಳ ಪ್ರಮುಖ ಮೂಲವಾಗಿದೆ. ರೈಲ್ವೆಯಂತಹ ಬೃಹತ್ ನಿರ್ಮಾಣ ಕಾರ್ಯಗಳಿಂದಾಗುವ ಹೂಳು ತುಂಬುವಿಕೆ, ಅಂತರ್ಜಲ ಮಾರ್ಗಗಳ ಅಡಚಣೆ, ಜಲದ ಕೊಂಡಿಗಳು ಕತ್ತರಿಸುವುದು, ಕೆಳಭಾಗದ ಹಲವು ಜಿಲ್ಲೆಗಳ ಕುಡಿಯುವ ನೀರು ಮತ್ತು ಕೃಷಿ ಭದ್ರತೆಯನ್ನು ನೇರವಾಗಿ ಅಪಾಯಕ್ಕೆ ಸಿಲುಕಿಸುತ್ತದೆ.

ವನ್ಯಜೀವಿಗಳಿಂದಾಗುವ ಬೆಳೆ ನಷ್ಟಕ್ಕೆ ದೀರ್ಘಕಾಲದವರೆಗೆ ಪರಿಹಾರ ನೀಡುವುದು, ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷಗಳನ್ನು ನಿರ್ವಹಿಸುವುದು ಮತ್ತು ವಿಪತ್ತು ಪೀಡಿತ ಪ್ರದೇಶಗಳನ್ನು ಮರುಸ್ಥಾಪಿಸುವ ದೀರ್ಘಾವಧಿಯ ಆರ್ಥಿಕ ಹೊರೆಯು, ಈ ರೈಲ್ವೆ ಮಾರ್ಗದಿಂದ ಬರಬಹುದಾದ ಅಂದಾಜು ಆದಾಯಕ್ಕಿಂತಲೂ ಹೆಚ್ಚಾಗಿರುತ್ತದೆ.

ಸಂಪೂರ್ಣವಾಗಿ ಪ್ರಾಕೃತಿಕವಾಗಿರುವ ಸೂಕ್ಷ್ಮ ವಲಯವನ್ನು ನಾಶಪಡಿಸುವ ಬದಲು, ಪ್ರಸ್ತುತ ಇರುವ ರಸ್ತೆ ಜಾಲಗಳನ್ನು ಮತ್ತು ರೈಲ್ವೆ ಮಾರ್ಗಗಳನ್ನು ಆಧುನೀಕರಿಸುವ ಹಾಗೂ ಉತ್ತಮಗೊಳಿಸುವ ಮೂಲಕ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚು ಸುಸ್ಥಿರವಾಗಿ ಸಾಧಿಸಬಹುದಾಗಿದೆ.

ಒಂದೆಡೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಜನರನ್ನು ‘ಪುನರ್ವಸತಿ’ ಹೆಸರಿನಲ್ಲಿ ಹೊರಗೆ ಕಳುಹಿಸಲಾಗುತ್ತಿದೆ. ಇನ್ನೊಂದೆಡೆ ಶೃಂಗೇರಿ ರೈಲು, ಆಗುಂಬೆ ಸುರಂಗ ಮಾರ್ಗ, ಹೆದ್ದಾರಿ ಮೊದಲಾದ ಪರಿಸರ ನಾಶದ ಯೋಜನೆಗಳು ತಯಾರಾಗುತ್ತಿವೆ. ಮತ್ತೊಂದೆಡೆ ಸಂರಕ್ಷಿತ ಪ್ರದೇಶದೊಳಗೆ ಪ್ರವಾಸೋದ್ಯಮ ಚಟುವಟಿಕೆಗಳು ಏರುತ್ತಿವೆ. ಇತ್ತೀಚೆಗೆ, ಮಲೆನಾಡಿನ ಎಲ್ಲೆಡೆ ವಿರಳ ಲೋಹಗಳು ಮತ್ತು ನಿರ್ಣಾಯಕ ಖನಿಜಗಳ ನಿಕ್ಷೇಪ ಪತ್ತೆಗೆ ವಿಮಾನ ಹಾರಾಟ ಜೋರಾಗಿ ನಡೆಯುತ್ತಿದೆ. ಮುಂದೆ ಗಣಿಗಾರಿಕೆಯ ಪ್ರಸ್ತಾಪಗಳು ‘ರಾಷ್ಟ್ರೀಯ ಹಿತಾಸಕ್ತಿ’ಯ ಹೆಸರಿನಲ್ಲಿ ಬರಬಹುದು. ಆಗ ಇನ್ನಷ್ಟು ಪರಿಸರ ನಾಶ ನಿಶ್ಚಿತ. ಜೊತೆಗೆ ಸ್ಥಳೀಯ ಜನರನ್ನು ಒಕ್ಕಲೆಬ್ಬಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಜನಪ್ರತಿನಿಧಿಗಳೇ, ಮಲೆನಾಡು ಭಾಗದ ಸಣ್ಣ ರೈತರ ಸಾಗುವಳಿ ಭೂಮಿಗಳಿಗೆ ಮೊದಲು ಹಕ್ಕುಪತ್ರ ಕೊಡಿ. ವಸತಿ ರಹಿತರಿಗೆ ಮನೆ ಕೊಡಿ‌. ಬೆಳೆ ಹಾನಿಗೆ ಗರಿಷ್ಠ ಪರಿಹಾರ ಕೊಡಿ. ಅಡಿಕೆಯ ರೋಗಗಳಿಗೆ ಔಷಧಿ ಕೊಡಿ. ಮೊದಲು ಮಲೆನಾಡಿಗರಿಗೆ ಭೂಮಿಯ ಹಕ್ಕು, ವಸತಿಯ ಹಕ್ಕು ಮತ್ತು ಬದುಕುವ ಹಕ್ಕನ್ನು ಖಾತರಿಪಡಿಸಿ. ಜೊತೆಗೆ, ಆಸ್ಪತ್ರೆ, ಶಾಲಾ-ಕಾಲೇಜುಗಳು, ಹಳ್ಳಿಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿ. ಈಗ ನಮಗೆ ಸುಸ್ಥಿರ ಅಭಿವೃದ್ಧಿಯ ಅಗತ್ಯವಿದೆಯೇ ಹೊರತು, ವಿನಾಶದ ಅಭಿವೃದ್ಧಿಯಲ್ಲ.

ಪಶ್ಚಿಮ ಘಟ್ಟಗಳ ನಿಜವಾದ ಆರ್ಥಿಕ ಮೌಲ್ಯವು ಅವು ಒದಗಿಸುವ ಇಂಗಾಲದ ಹೀರುವಿಕೆ, ಹವಾಮಾನ ನಿಯಂತ್ರಣ ಮತ್ತು ನೀರಿನ ಪೂರೈಕೆಯಂತಹ ಪರಿಸರ ಸೇವೆಗಳಲ್ಲಿ ಅಡಗಿದೆ. ಇಲ್ಲಿ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಯೋಜನೆಗಳು, ತಾತ್ಕಾಲಿಕ ವಾಣಿಜ್ಯ ಲಾಭಕ್ಕಾಗಿ, ಭರಿಸಲಾಗದ ನೈಸರ್ಗಿಕ ಸಂಪತ್ತನ್ನು, ಅನ್ಯಾಯವಾಗಿ ಬಲಿ ನೀಡಿದಂತಾಗುತ್ತದೆ. ಹಾಗಾಗಿ ಶೃಂಗೇರಿ ರೈಲ್ವೆ ಯೋಜನೆಯನ್ನು ಮರುಚಿಂತನೆ ಮಾಡುವುದು ವಿವೇಕದ ನಡೆಯಾಗಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!