ಆಲ್ದೂರು: ಜನಸಾಮಾನ್ಯರಿಗೆ ಆರೋಗ್ಯ ಮತ್ತು ಶಿಕ್ಷಣ ಸವಲತ್ತನ್ನು ಸರ್ಕಾರಗಳು ಉಚಿತವಾಗಿ ನೀಡಿದ್ದಲ್ಲಿ ದೇಶವು ಅಭಿವೃಧ್ದಿ ಹೊಂದುವ ಜೊತೆಗೆ ಸಮಾಜವು ಆರೋಗ್ಯಪೂರ್ಣ ಮತ್ತು ಸುಸ್ಥಿರತೆಯಿಂದ ಕೂಡಿರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಹೇಳಿದರು.
ತಾಲ್ಲೂಕಿನ ಆಲ್ದೂರು ಗ್ರಾಮದಲ್ಲಿ ಶುಕ್ರವಾರ ವಿದ್ಯಾ ಹರ್ಬ್ಸ್ ವಿದ್ಯಾ ಕಾಫಿ ಸಂಸ್ಥೆಯ ಸರಸ್ವತಿ ಕೆ.ಎಂ. ಭಟ್ ಫೌಂಡೇಶನ್ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನೂತನವಾಗಿ ನಿರ್ಮಾಣ ಮಾಡುತ್ತಿರುವ ಸಿಸಿಎಸ್‌ಆರ್ ಕೆಪಿಎಸ್ ಶಾಲಾ ನೂತನ ಕಟ್ಟಡ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಶ್ಯಾಂಪ್ರಸಾದ್ ಕುಟುಂಬವು ಸಂಸ್ಥೆಯ ಸಿಎಸ್‌ಆರ್ ಅನುದಾನದ ಜೊತೆಗೆ ವೈಯಕ್ತಿಕವಾಗಿ ಹಣವನ್ನು ಒದಗಿಸುವ ಮೂಲಕ ಭವ್ಯವಾದ ಶಾಲಾ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸಮಾಜಕ್ಕೆ ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಇತ್ತೀಚೆಗೆ ಸರ್ಕಾರಗಳೇ ಮೂರ‍್ನಾಲ್ಕು ಭಾರಿ ಟೆಂಡರ್ ಕರೆದರೂ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತದೆ. ಆದರೆ ವಿದ್ಯಾ ಹರ್ಬ್ಸ್ ಸಂಸ್ಥೆ ಆಸೆ, ಆಕಾಂಕ್ಷೆಗಳಿಗೆ ಒಳಗಾಗದೇ ಜನರ ಸರ್ವತೋಮುಖ ಅಭಿವೃದ್ದಿಗೆ ಕೋಟಿಗಟ್ಟಲೇ ಹಣ ಹೂಡಿ ಜನರಿಗೆ ಸ್ಪಂದಿಸುತ್ತಿದ್ದು ಈ ಸತ್ಕಾರ್ಯದ ಫಲ ಅವರ ಕುಟುಂಬಕ್ಕೂ ಇನ್ನಷ್ಟು ವೃದ್ದಿಯಾಗಲಿ ಎಂದು ಆಶಿಸಿದರು.
ಮಾನವ ಎಷ್ಟೇ ಶ್ರೀಮಂತನಾದರೂ, ದಾನದ ಗುಣ ಮೈಗೂಡಿಸಿಕೊಳ್ಳದಿದ್ದಲ್ಲಿ ಜೀವನವೇ ವ್ಯರ್ಥವಾ ಗಲಿದೆ. ಆ ದಿಸೆಯಲ್ಲಿ ಶ್ಯಾಂಪ್ರಸಾದ್ ಕುಟುಂಬವು ಮಾಡುತ್ತಿರುವ ಸತ್ಕಾರ್ಯದ ಕಾರ್ಯ ಶ್ರೇಷ್ಟವಾಗಿದೆ. ಆಸ್ಪತ್ರೆ ಸೇರಿದಂತೆ ಶಾಲೆ ಎರಡು ಕೂಡಾ ಅತ್ಯುತ್ತಮ. ಈ ದಾನ ವ್ಯರ್ಥವಾಗುವುದಿಲ್ಲ. ನೂರುಮಡಿಯಾಗಿ ಭಗವಂತನು ಮರಳಿ ಅನುಗ್ರಹಿಸುತ್ತಾನೆ ಎಂದರು.
ವಿದ್ಯಾಹಬ್ಸ್ ಸಂಸ್ಥೆಯು ಹಿಂದೆ ಹಿರೇಮಗಳೂರಿನಲ್ಲಿ ಆಸ್ಪತ್ರೆ, ಆರದವಳ್ಳಿ ಸಮೀಪ ಗೋಶಾಲೆ ನಿರ್ಮಿಸಿದ್ದು ಇದೀಗ ಮೂರನೇ ಭಾಗವಾಗಿ ಆಲ್ದೂರಿನಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಶಾಲಾ ಕಟ್ಟಡವನ್ನು ನಿರ್ಮಿಸುವ ಮೂಲಕ ಬಡವರ್ಗದ ಜನರಿಗೆ ಕೈಲಾದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು
ಯೋಗ ಯೋಗದ ನಂಟಿನೊಂದಿಗೆ ತಾವು ಜನಿಸಿದ ಆಸ್ಪತ್ರೆ ಹಾಗೂ ಓದಿದ ಶಾಲೆಯು ಇದಾಗಿದ್ದು ಪೂರ್ಣಪ್ರಮಾಣ ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗುತ್ತಿರುವುದು ಉತ್ತಮ ಬೆಳವಣಿಗೆ. ಇದು ಆಲ್ದೂರು ಸುತ್ತಮುತ್ತಲಿನ ಗ್ರಾಮೀಣ ಮಧ್ಯಮ ಹಾಗೂ ಬಡವರಿಗೆ ಅನುಕೂಲವಾಗಲಿದೆ ಎಂದರು.
ವಿದ್ಯಾ ಹರ್ಬ್ಸ್ ಪ್ರೈವೇಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಶ್ಯಾಂಪ್ರಸಾದ್ ಮಾತನಾಡಿ ಮಲೆನಾಡು ಸೊಬಗನ್ನು ಹೊಂದಿರುವ ಗ್ರಾಮ ಆಲ್ದೂರು. ಅನೇಕ ಹಳ್ಳಿಜನರನ್ನು ಸಂಪರ್ಕಿಸುವ ಪ್ರಮುಖ ಹೋಬಳಿಯಾಗಿದ್ದು ಈ ಸ್ಥಳದಲ್ಲಿ ಆಸ್ಪತ್ರೆ ಹಾಗೂ ಶಾಲಾ ಕಟ್ಟಡ ನಿರ್ಮಿಸಿದ್ದಲ್ಲಿ ಮಾತ್ರ ಫಲಕಾರಿಯಾಗಲಿದೆ ಎಂಬುದನ್ನು ಮನಗಂಡು ಪ್ರಾರಂಭಿಸಲಾಗಿದೆ ಎಂದರು.
ಪ್ರಸ್ತುತ ಶಾಲಾ ಕಟ್ಟಡವು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಎಲ್‌ಕೆಜಿ ಯಿಂದ ಪಿಯುಸಿವರೆಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಕಟ್ಟಡ ನಿರ್ಮಿಸಲಾಗುತ್ತಿದೆ. ಹೀಗಾಗಿ ಈ ಕಟ್ಟಡದ ಸದುಪಯೋಗವನ್ನು ಹೋಬಳಿಯ ಎಲ್ಲಾ ಭಾಗದ ಜನರು, ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡಲ್ಲಿ ಮಾತ್ರ ಈ ಕಾರ್ಯಕ್ಕೆ ಯಶಸ್ಸು ಸಿಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆ ರ್.ರುದ್ರಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ರೈತ ಸಂಘದ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ತುಳಸೇಗೌಡ,
ವಿದ್ಯಾ ಸಂಸ್ಥೆಯ ನಿರ್ವಹಣ ನಿರ್ವಾಹಕರಾದ ಭಾನುಪ್ರಕಾಶ್, ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷ/ಉಪಾಧ್ಯಕ್ಷರು ಪ್ರಮೋದ್,ಪರಮೇಶ್ ಪಿ ಮತ್ತು ಸದಸ್ಯರುಗಳು ಸತೀಶ್ ಸೋಮಶೇಖರ್ ವಸಂತ್ ಕುಮಾರ್ ಲಕ್ಷ್ಮಣ್ ನಟೇಶ್ ಜ್ಯೋತಿ ಸುಮಯ ವಾಸಿ ಬಾಷಾ, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಪೂಣೇಶ್‌ಗೌಡ,ಸುರೇಶ್ ಆಚಾರ್ಯ , ಹಳೇ ವಿದ್ಯಾರ್ಥಿಗಳದ ಲತೇಶ್, ಅವಿನಾಶ್ ಆಚಾರ್ಯ ಸೇರಿದಂತೆ ಸ್ಥಳೀಯರು ಇದ್ದರು
