ಮೂಡಿಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಖಂಡಿಸಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ರಾಜ್ಯ ಕಾಂಗ್ರೆಸ್ ಸರಕಾರ ರೈತ ಹಾಗೂ ಜನ ವಿರೋಧಿ ಆಡಳಿತ ನಡೆಸುತ್ತಿರುವ ಹಿನ್ನಲೆಯಲ್ಲಿ ಅನೇಕ ವರ್ಷದಿಂದ ಎದುರಿಸುತ್ತಿರುವ ತಾಲೂಕಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು
ಅವರು ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಎದುರು ಜೆಡಿಎಸ್ ಪಕ್ಷದಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದರಿಂದ ಕಾಫಿ ಹಾಗೂ ಇತರೆ ಉಪಬೆಳೆಗಳ ಮೇಲೆ ಅವಲಂಬಿತವಾಗಿರುವ ಸಾವಿರಾರು ರೈತ ಕುಟುಂಬಗಳು ಹವಾಮಾನ ವೈಪರೀತ್ಯ, ಬೆಲೆ ಕುಸಿತ, ಸಾಲದ ಹೊರೆ, ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಬದುಕುವುದೇ ಕಷ್ಟವಾಗಿದೆ. ಅಕ್ರಮ ಸಕ್ರಮ ಕಮಿಟಿ ರಚನೆಯಾಗಿದ್ದರೂ ಸಭೆ ನಡೆಸುತ್ತಿಲ್ಲ. ಇದರಿಂದ ಫಾರಂ ನಂ 50, 53, 57 ಅರ್ಜಿಗಳು ವಿಲೆ ಸಾಧ್ಯವಾಗದಂತಾಗಿದೆ. 94ಸಿ ಅರ್ಜಿಗಳ ವಿಲೇ ಕೂಡ ಮಾಡುತ್ತಿಲ್ಲ. ಇದೂ ಹೀಗೆ ಮುಂದುವರೆದರೆ ಮುಂದಿನ ದಿನ ಉಗ್ರ ರೂಪದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಹಿರಿಯ ಮುಖಂಡ ಗಬ್ಬಳ್ಳಿ ಚಂದ್ರೇಗೌಡ ಮಾತನಾಡಿ, ಸಹಕಾರ ಸಂಘಗಳಿಗೆ ಬಡ್ಡಿ ರಹಿತ ಸಾಲ ಕೊಡುತ್ತೇವೆಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಸರಕಾರ ಇದೂವರೆಗೂ ಕಾರ್ಯರೂಪಕ್ಕೆ ತಂದಿಲ್ಲ. ಗ್ಯಾರಂಟಿ ಯೋಜನೆಯಿಂದಾಗಿ ರಸ್ತೆ ಸೇರಿದಂತೆ ಅಭಿವ್ಥದ್ಧಿ ಕೆಲಸವಾಗುತ್ತಿಲ್ಲ. ಕೆವೈಸಿ ಹೆಸರಿನಲ್ಲಿ ಗೃಹಲಕ್ಷಿ ಹಣ ಕೊಡುವುದನ್ನೇ ನಿಲ್ಲಿಸಿದ್ದಾರೆ. ನಿಜವಾಗಿಯೂ ರೈತರು ಹಾಗೂ ಬಡ ಜನರ ಮೇಲೆ ಕಾಳಜಿ ಇದ್ದರೆ ಕೂಡಲೇ ಸರಕಾಋಇ ಜಮೀನನ್ನು ದೀರ್ಘಾವಧಿ ಗುತ್ತಿಗೆ ನೀಡಬೇಕು. ಫಾರಂ ನಂ 53, 94ಸಿ ಅರ್ಜಿ ವಿಲೇ ಮಾಡಬೇಕು. ಕಾಡುಪ್ರಾಣಿಗಳ ಹಾವಳಿಯಿಂದ ಶಾಶ್ಚತ ಮುಕ್ತಿ ದೊರಕಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ಯಲ್ಲಿ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್, ತಾಲೂಕು ಅಧ್ಯಕ್ಷ ಲಕ್ಷ್ಮಣ್ ಗೌಡ, ಜ್ವಾಲನಯ್ಯ ಕಳಸ, ರವಿ ವಸ್ತಾರೆ, ಎಂ.ಸಿ.ಹೂವಪ್ಪ, ಝಕರಿಯಾ ಜಾಕೀರ್, ಲೋಹಿತ್ ಬಿದರಹಳ್ಳಿ, ಅರೆಕುಡಿಗೆ ಶಿವಣ್ಣ, ರಘು ಉದುಸೆ, ರುದ್ರೇಗೌಡ, ಸಂಪತ್, ನಿಡಗೂಡು ಚಂದ್ರೇಗೌಡ, ಸಂದೀಪ್ ನಂದಿಪುರ, ಮಂಜುನಾಥ್ ಬೆಟ್ಟಗೆರೆ ಮತ್ತಿತರರಿದ್ದರು.
