ಮೂಡಿಗೆರೆ: ತಾಲೂಕಿನ ಬಕ್ಕಿ ಗ್ರಾಮದಲ್ಲಿ ಕಾಡುಕೋಣಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಕಳೆದ ನಾಲ್ಕೈದು ತಿಂಗಳಿಂದ ಸುಮಾರು 50ಕ್ಕೂ ಹೆಚ್ಚು ಕಾಡುಕೋಣಗಳು ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ನಿರಂತರವಾಗಿ ವಾಸ್ತವ್ಯ ಹೂಡಿರುವುದು ಜನರ ನಿದ್ದೆಗೆಡಿಸಿದೆ.
ಮಾಧ್ಯಮದೊಂದಿಗೆ ತೋಟದ ಮಾಲೀಕರಾದ ಕಾರ್ತಿಕ್ ಗೌಡ ಮಾತನಾಡುತ್ತಾ ಪ್ರಸ್ತುತ ಕಾಫಿ ಕೊಯ್ಲು ಕಾರ್ಯ ನಡೆಯುತ್ತಿದ್ದು, ತೋಟಗಳಿಗೆ ತೆರಳುವ ಕಾರ್ಮಿಕರು ಹಾಗೂ ತೋಟ ಮಾಲೀಕರು ಪ್ರಾಣಭಯದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಡುಕೋಣಗಳು ಗುಂಪುಗುಂಪಾಗಿ ತೋಟಗಳಲ್ಲಿ ಸಂಚರಿಸುತ್ತಿರುವುದರಿಂದ ಯಾವುದೇ ಸಮಯದಲ್ಲಾದರೂ ಅಪಾಯ ಸಂಭವಿಸಬಹುದೆಂಬ ಆತಂಕ ಮನೆಮಾಡಿದೆ.
ಬುಧವಾರ ಬಕ್ಕಿ ಗ್ರಾಮದಲ್ಲಿ ಮೆಣಸೆಗೌಡ ಎಂಬವರ ಹಸುವಿನ ಮೇಲೆ ಕಾಡುಕೋಣಗಳು ಮಾರಣಾಂತಿಕ ದಾಳಿ ನಡೆಸಿರುವ ಘಟನೆ ನಡೆದಿದ್ದು, ಕೂಡಲೇ ಕರೆಗೆ ಸ್ಪಂದಿಸಿದ ಪಶು ವೈದ್ಯಕೀಯ ಪರೀಕ್ಷಕರು ಆದ ನಾಗರಾಜ್ ಅವರು ಹಸುವಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿರುತ್ತಾರೆ. ಈ ಘಟನೆಯಿಂದ ಗ್ರಾಮಸ್ಥರನ್ನು ಇನ್ನಷ್ಟು ಭಯಭೀತರನ್ನಾಗಿಸಿದೆ. ಈ ಘಟನೆ ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಜನರು ಹೊರಗೆ ಓಡಾಡಲು ಸಹ ಹೆದರುವ ಸ್ಥಿತಿ ಉಂಟಾಗಿದೆ.
ಈ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲವೆಂದು ಆರೋಪಿಸಿದ್ದಾರೆ. ಕೂಡಲೇ ಈ ವಿಷಯಕ್ಕೆ ಗಮನಹರಿಸಿ ಕಾಡುಕೋಣಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಮಾನವ ಹಾಗೂ ಪಶುಸಂಪತ್ತಿಗೆ ಅಪಾಯವಾಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.
