ಕಳಸ: ಬದಲಾದ ಭಾರತದಲ್ಲಿ ಎಳೆ ಮಕ್ಕಳಿಗೆ ಅರ್ಥ ಮಾಡಿಸಿಕೊಳ್ಳುವುದರಲ್ಲಿ ನಾವು ವಿಫಲರಾಗಿದ್ದೇವೆ. ನಮ್ಮ ಧಾರ್ಮಿಕ ಕೇಂದ್ರಗಳು ಶೃದ್ದೆಯಿಂದ ಇಡೀ ಸಮಾಜವನ್ನ ಒಂದು ತಂಡವಾಗಿ ಜಾತಿ ಧರ್ಮವನ್ನ ನೋಡದೆ ರಾಷ್ಟ್ರ ಭಕ್ತರನ್ನು ನಿರ್ಮಾಣ ಮಾಡುವ ಕೇಂದ್ರವಾಗಬೇಕೆಂದು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕರೆನೀಡಿದರು.

ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಲಲಿತ ಕಾಲಾ ಮಂಟಪದಲ್ಲಿ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ದಿ ಯೋಜನೆಯ ಅನ್ನದಾಸೋಹ ಯೋಜನೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮತ್ತು ಆಯೋಗದ ದೇವಸ್ಥಾನಗಳಿಗೆ 2500 ತಟ್ಟೆ ಲೋಟಗಳ ವಿತರಣಾ ಕಾರ್ಯಕ್ರಮ, ಶೈಕ್ಷಣಿಕ ಯೋಜನೆಯಡಿಯಲ್ಲಿ ಕಳಸ ತಾಲ್ಲೂಕಿನ ಶಾಲಾ ಮಕ್ಕಳಿಗೆ 15000 ಟಿಪ್ಪಣಿ ಪುಸ್ತಕಗಳ ವಿತರಣೆ ಹಾಗೂ ಪ್ರೌಢ ಶಾಲೆಗಳು, ಪದವಿ ಪೂರ್ವ ಮತ್ತು ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಶಾಲಾ ಶುಲ್ಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಶ್ರೀಕ್ಷೇತ್ರ ಹೊರನಾಡು ಗ್ರಾಮೀಣಾಭೀವೃದ್ದಿ ಯೋಜನೆಯಡಿಯಲ್ಲಿ 1991-92 ರಿಂದ 2026 ರವರೆಗೂ 24 ಕೋಟಿ ರೂಗಳನ್ನು ವ್ಯಯಿಸುವುದರ ಮೂಲಕ ಭಕ್ತರಿಂದ ಬಂದ ಹಣವು ಭಕ್ತರಿಗೆ ವಿನಿಯೋಗ ಆಗುವುದರ ಮೂಲಕ ಹತ್ತು ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಹೆಮ್ಮಯ ಸಂಗತಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ ಅಜ್ಜ ಅಪ್ಪ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಸಾರ್ವಜನಿಕರ ಸೇವೆಯಲ್ಲಿ ತೊಡಗಿದ್ದು ಮುಂದೆಯೂ ಸಹಾ ಸಾರ್ವಜನಿಕ ಸೇವೆಗೆ ತಮ್ಮ ಕುಟುಂಬ ಸಿದ್ದವಿರುತ್ತದೆ . ಒಂದು ಕುಟುಂಬ ಒಳ್ಳೇಯ ರೀತಿಯಲ್ಲಿ ಸಂಸ್ಕಾರ ಹಿತವಾಗಿ ನಡೆಯುವ ವ್ಯವಸ್ಥೆ ಆಗಬೇಕು, ಆ ಕುಟುಂಬ ಒಳ್ಳೆಯ ವ್ಯವಸ್ಥೆಗೆ ಪೂರಕವಾಗುವ ನಿಟ್ಟಿನಲ್ಲಿ ಆ ಕುಟುಂಬದ ಮಕ್ಕಳು ಒಳ್ಳೆಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದಾದರೆ ಮೊದಲು ಅವರಿಗೆ ಹೊಟ್ಟೆ ತಣ್ಣಗಿರಬೇಕು, ಯಾವುದೇ ಮನೆಯಲ್ಲಿ ಯಾವುದೇ ಮಕ್ಕಳು ಮತ್ತು ಮನೆಯವರು ಹಸಿವಿನಿಂದ ಬಳಲಬಾರದಂತಹ ವ್ಯವಸ್ಥೆಯಾದಲ್ಲಿ ಅವರ ಜೀವನ ಮುನ್ನಡೆಯಲು ಸಾಧ್ಯವಾಗುತ್ತದೆ ಎಂಬುವುದೆ ಈ ಕ್ಷೇತ್ರದ ಪರಂಪರೆಯಿಂದ ಬಂದಿರುವಂತಹದು. ಹಾಗಾಗಿ ಈ ಕ್ಷೆತ್ರಕ್ಕೆ ಯಾರೇ ಬಂದರೂ ಮೊದಲು ಆತಿಥ್ಯ ,ಭೋಜನದ ವ್ಯವಸ್ಥೆ ಆನಂತರ ದೇವರ ದರ್ಶನ ಪೂಜೆ ನನ್ನ ಅಜ್ಜ ಹೇಳುತ್ತಿದ್ದರು ಎಂದರು.
ವೇದಿಕೆಯಲ್ಲಿ ರಾಜಲಕ್ಷ್ಮೀ ಜೋಷಿ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ್ ಜೈನ್, ರಾಜಗೋಪಾಲ ಜೋಷಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹೇಮಂತ ಗೋಕುಲೆ ಪ್ರಾರ್ಥನೆ ನೆರವೇರಿಸಿದರು, ಜಿ.ಬಿ.ಗಿರಿಜಾಶಂಕರ್ ಜೋಷಿ ಪ್ರಾಸ್ತಾವಿಕ ನುಡಿ ಮಾತನಾಡಿದರು. ಭವಾನಿಶಂಕರ್ ಜೋಷಿ ವಂದನಾರ್ಪಣೆ ಮಾಡಿದರು.
