ಶೃಂಗೇರಿ ಕ್ಷೇತ್ರದ ಇಂದಿನ ಪರಿಸ್ಥಿತಿಯನ್ನು ನೋಡಿದಾಗ ಜನರ ಮೂಲಭೂತ ಸಮಸ್ಯೆಗಳು ದಿನದಿಂದ ದಿನಕ್ಕೆ ಗಂಭೀರವಾಗುತ್ತಿವೆ ಎಂಬ ನೋವು ಸಾಮಾನ್ಯ ಜನರಲ್ಲಿ ಹೆಚ್ಚುತ್ತಿದೆ. ರಾಜ್ಯ, ದೇಶ ಮತ್ತು ಸಮಾಜ ಆರ್ಥಿಕವಾಗಿ ಸಬಲವಾಗಬೇಕಾದರೆ ಕೇವಲ ಉಚಿತ ಯೋಜನೆಗಳು ಸಾಕಾಗುವುದಿಲ್ಲ. ಜನರಿಗೆ ಶಾಶ್ವತ ಬದುಕು ಕಟ್ಟಿಕೊಡುವ ಉದ್ಯೋಗ, ಸಣ್ಣ ವ್ಯಾಪಾರಗಳಿಗೆ ಬೆಂಬಲ, ಕೃಷಿಗೆ ಬಲ, ಯುವಕರಿಗೆ ಕೌಶಲ್ಯಾಭಿವೃದ್ಧಿ ಮತ್ತು ಜೀವನ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಶಕ್ತಿ ನೀಡುವ ನೀತಿಗಳು ಮುಖ್ಯವಾಗಬೇಕು ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತರರಾದ ಸುಧಾಕರ್ ಎಸ್ ಶೆಟ್ಟಿ ತಿಳಿಸಿದರು.
ಇಂದು ಶೃಂಗೇರಿ ಕ್ಷೇತ್ರದ ಹಲವಾರು ಗ್ರಾಮಗಳ ರಸ್ತೆಗಳ ದುಃಸ್ಥಿತಿ ಅತ್ಯಂತ ಕಳವಳಕಾರಿ. ಒಂದು ಊರಿನಿಂದ ಮತ್ತೊಂದು ಊರಿಗೆ ದೈನಂದಿನ ಕೆಲಸಗಳಿಗೆ ಹೋಗುವುದೇ ಜನರಿಗೆ ಕಷ್ಟಕರವಾಗಿದೆ. ರೈತರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮತ್ತು ಸಾಮಾನ್ಯ ಜನರು ಮೂಲಭೂತ ಸಂಚಾರ ವ್ಯವಸ್ಥೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಸಹಕಾರ ಸಾರಿಗೆ ಸಂಸ್ಥೆ ಮೂಲಕ ಗ್ರಾಮೀಣ ಭಾಗದ ಜನರಿಗೆ ಸುಲಭ ಸಂಚಾರ ವ್ಯವಸ್ಥೆ ಇತ್ತು. ಇಂದು ಅನೇಕ ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಬಂದು ವಾಪಸ್ ಮನೆ ತಲುಪುವುದೇ ದೊಡ್ಡ ಸಮಸ್ಯೆಯಾಗಿದೆ. ಆದರೆ ಈ ವಿಚಾರದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂಬ ಆಕ್ರೋಶ ಜನರಲ್ಲಿ ಕೇಳಿಬರುತ್ತಿದೆ.
ಶಿಕ್ಷಣ ಕ್ಷೇತ್ರದಲ್ಲಿಯೂ ಪರಿಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ನೀಡಲೇಬೇಕಾದ ಅತ್ಯಂತ ದೊಡ್ಡ ಬಲವಾದ ಸರ್ಕಾರಿ ಶಿಕ್ಷಣ ವ್ಯವಸ್ಥೆ ದುರ್ಬಲವಾಗುತ್ತಿದೆ. ಪ್ರತಿ ವರ್ಷವೂ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಗ್ರಾಮೀಣ ಬಡ ಮಕ್ಕಳ ಭವಿಷ್ಯ ಅಂಧಕಾರವಾಗುತ್ತಿದೆ.
ಹಲವಾರು ಕುಟುಂಬಗಳು ಹೆಣ ಸುಡಲು ಸ್ಮಶಾನವಿಲ್ಲದೆ ಸರ್ಕಾರದೊಡನೆ ಹಲವಾರು ವರ್ಷಗಳಿಂದ ಸ್ಮಶಾನ ಜಾಗಕ್ಕಾಗಿ ಬೇಡಿಕೆ ನೀಡಿ ಹೋರಾಟ ಮಾಡುವ ಪರಿಸ್ಥಿತಿ ಇದೆ
ಆರೋಗ್ಯ ಸೇವೆಯ ಪರಿಸ್ಥಿತಿಯೂ ಇದೇ ರೀತಿಯಾಗಿದೆ. ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ಶೃಂಗೇರಿ ಕ್ಷೇತ್ರದ ಜನರು ಮಣಿಪಾಲ, ಶಿವಮೊಗ್ಗ, ಮಂಗಳೂರು ಮತ್ತು ಬೆಂಗಳೂರಿನಂತಹ ನಗರಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ಕುಟುಂಬಗಳಿಗೆ ಇದು ದೊಡ್ಡ ಆರ್ಥಿಕ ಹೊರೆಯಾಗಿದೆ.
ಇದೀಗ AI ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬೆಳವಣಿಗೆಯ ನಡುವೆ ವಿದ್ಯಾವಂತ ಯುವಕರು ಉದ್ಯೋಗದ ಕೊರತೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಪದವಿ ಪಡೆದರೂ ಕೆಲಸ ಇಲ್ಲ, ಅವಕಾಶ ಇಲ್ಲ ಎಂಬ ಭಾವನೆ ಅನೇಕ ಮನೆಗಳಲ್ಲಿ ಆತಂಕ ಸೃಷ್ಟಿಸಿದೆ ವಿದ್ಯಾವಂತ ಯುವಕರು ತಂದೆ ತಾಯಿಯನ್ನು ಎದುರಿಸಲಾಗಿದೆ ಸಮಾಜವನ್ನು ಎದುರಿಸಲಾಗದೆ ಮೌನವಾಗಿ ಎಲ್ಲವನ್ನು ಸಹಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ .
ಇನ್ನೊಂದೆಡೆ ಅರಣ್ಯ ಪ್ರದೇಶದ ಜನರ ಸಮಸ್ಯೆಗಳು ಕೂಡ ಗಂಭೀರವಾಗಿವೆ. ಒತ್ತುವರಿ ಹೆಸರಿನಲ್ಲಿ ಅರಣ್ಯ ಇಲಾಖೆಯ ದಬ್ಬಾಳಿಕೆ, ಯಾವುದೇ ಇ-ಖಾತೆ ಅಥವಾ ಹಕ್ಕುಪತ್ರಕ್ಕೆ ಅರಣ್ಯ ಇಲಾಖೆಯ ಅನುಮತಿ ಬೇಕಾದ ಪರಿಸ್ಥಿತಿ, ಈಗಾಗಲೇ ನೀಡಿರುವ ಸಾಗುವಳಿ ಚೀಟಿಗಳಿಗೆ ಕಂದಾಯ ಇಲಾಖೆ ಪರವಾನಗಿ ನೀಡದಿರುವುದು — ಇವೆಲ್ಲ ಗ್ರಾಮೀಣ ಬಡ ಕುಟುಂಬಗಳನ್ನು ಅನಿಶ್ಚಿತತೆಯಲ್ಲಿಟ್ಟಿವೆ.
30–40 ವರ್ಷಗಳಿಂದ ಬದುಕುತ್ತಿರುವ ಅನೇಕ ಕುಟುಂಬಗಳಿಗೆ ಇಂದಿಗೂ ಮನೆಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ. ಪ್ಲಾಸ್ಟಿಕ್ ಶೀಟಿನಡಿ ಜೀವನ ಸಾಗಿಸುವ ಕುಟುಂಬಗಳು ಶೃಂಗೇರಿ ಕ್ಷೇತ್ರದಲ್ಲಿರುವುದು ಅಭಿವೃದ್ಧಿಯ ಬಗ್ಗೆ ಗಂಭೀರ ಪ್ರಶ್ನೆ ಎತ್ತುತ್ತದೆ.
ಕಳೆದ ಹತ್ತು ವರ್ಷಗಳಿಂದ ಪರಸ್ಪರ ದೂಷಣೆ, ರಾಜಕೀಯ ವೈಮನಸ್ಸು ಮತ್ತು ಇದೀಗ ಆಣೆ-ಪ್ರಮಾಣಗಳ ರಾಜಕಾರಣದಲ್ಲೇ ಸಮಯ ಕಳೆಯಲಾಗಿದೆ. ಆದರೆ ಇಂದು ಅಂಗಡಿಗಳಲ್ಲಿ ಹೋಟೆಲ್ಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಜನರ ನೈಜ ಸಮಸ್ಯೆಗಳ ಬಗ್ಗೆ ಚರ್ಚೆ ಕಡಿಮೆಯಾಗಿದೆ ಎಂಬ ಬೇಸರ ಇದೆ.
ಇದೀಗ ಕ್ಷೇತ್ರದ ಚುನಾವಣಾ ವಿಚಾರವೂ ನ್ಯಾಯಾಲಯದಲ್ಲಿದ್ದು, ಅಂತಿಮ ತೀರ್ಪನ್ನು ಜನ ತಾಳ್ಮೆಯಿಂದ ಕಾಯಬೇಕಾಗಿದೆ. ಇಂತಹ ಸಮಯದಲ್ಲಿ ರಾಜಕೀಯ ನಾಯಕರನ್ನು ಖುಷಿಪಡಿಸಲು ವಾಟ್ಸಪ್, ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆಗಳಲ್ಲಿ ಅನಗತ್ಯ ಪ್ರಚಾರ ಮಾಡುವುದಕ್ಕಿಂತ — ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳುವುದು ಹೆಚ್ಚು ಅಗತ್ಯ.
ಸ್ಥಳೀಯ ಬಡವರು, ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಯುವಕರ ಬದುಕಿಗೆ ನೀವು ಏನು ಮಾಡಿದ್ದೀರಿ ಎಂಬ ಪ್ರಶ್ನೆ ಕೇಳುವ ಜನಜಾಗೃತಿ ಬೆಳೆಯಬೇಕು. ಯಾಕೆಂದರೆ ನಿಮ್ಮ ಭವಿಷ್ಯ ಮತ್ತು ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ. ಕೇವಲ ಜೈಕಾರ, ಭಾವನಾತ್ಮಕ ರಾಜಕೀಯ ಮತ್ತು ವ್ಯಕ್ತಿಪೂಜೆಯಲ್ಲಿ ಬದುಕುತ್ತಾ ಹೋದರೆ ಕ್ಷೇತ್ರದ ಪರಿಸ್ಥಿತಿ ಬದಲಾಗುವುದಿಲ್ಲ. ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಜನರು ಒಟ್ಟಾಗಿ ಧ್ವನಿ ಎತ್ತಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ.
