ಬೆಂಗಳೂರು: ದಸರಾ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಆರಂಭವಾಗಿರುವ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ರಾಜ್ಯದ ನಾನಾ ಪ್ರದೇಶಗಳಿಗೆ ರಾಜಧಾನಿಯಿಂದ ಬಸ್ ಸಂಚಾರ ಹೆಚ್ಚಿಸಲಾಗಿದೆ. ಹಬ್ಬದ ರಜಾ ದಿನದಲ್ಲಿ ಉಂಟಾಗುವ ದಟ್ಟಣೆ ನಿಭಾಯಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ಹೆಚ್ಚುವರಿ ಬಸ್ ಸೇವೆ ಒದಗಿಸಿದೆ.
ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಸುವವರಿಗೆ ಹಾಗೂ ರಜೆಯ ನಂತರ ಬೆಂಗಳೂರಿಗೆ ಮರಳುವವರ ಅನುಕೂಲಕ್ಕಾಗಿ ಈ ವಿಶೇಷ ಸೇವೆಗಳನ್ನು ಕಲ್ಪಿಸಲಾಗಿದೆ. ಅಕ್ಟೋಬರ್ 16 ಮತ್ತು 20 ರ ನಡುವೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 3,000ಕ್ಕೂ ಹೆಚ್ಚು ವಿಶೇಷ ಬಸ್ಗಳು ಸಂಚರಿಸಲಿವೆ. ವಾಪಸಾತಿ ಪ್ರಯಾಣಕ್ಕಾಗಿ ಅಕ್ಟೋಬರ್ 20 ಮತ್ತು 21 ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸಲಾಗುವುದು ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
